Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

211 ನೆಯ ಮನೆ ಮನೆ ಕವಿಗೋಷ್ಠಿ

ಹಾಸನ ಃ ನಿತ್ಯ ತಾಪತ್ರಯಗಳ ನಡುವೆ ಹಿಂಸೆಗೆ ಪ್ರತಿಯಾಗಿ ಅಹಿಂಸೆ, ಸತ್ಯದಾ ಪಥದ ಧರ್ಮ, ಉಪವಾಸ ಮತ್ತು ಬದುಕಿನ ಸಮನ್ವಯತೆ, ಶಾಂತಿಯುತ ಸತ್ಯಾಗ್ರಹಗಳಿಂದ ಸರಳತೆಯ ಸಂಕೇತವಾಗಿ, ಗಟ್ಟಿತನದ ವಿಚಾರವಂತರಾಗಿ ಗಾಂಧಿ ನಮ್ಮೆದುರಿಗೆ ನಿಲ್ಲುತ್ತಾರೆ ಎಂದು ವಿಚಾರವಾದಿ ಅಹಮ್ಮದ್ ಹಗರೆಯವರು ಹೇಳಿದರು.

ಅವರು ಹಾಸನದ ಜಯನಗರದಲ್ಲಿರುವ ಟಿ.ಎಚ್.ಅಪ್ಪಾಜಿಗೌಡರ ‘ಬಾಂದಳ’ ನಿಲಯದಲ್ಲಿ ನಡೆದ 211 ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ ‘ಕನ್ನಡ ಸಾಹಿತಿಗಳು ಕಂಡಂತೆ ಗಾಂಧಿ’ ಎಂಬ ವಿಷಯದಡಿ ಉಪನ್ಯಾಸ ನೀಡಿದರು.
ಪರಿಸರ, ಸಮಾಜ, ವಿಜ್ಞಾನ, ರಾಜಕೀಯ, ಸಾಹಿತ್ಯ ಹೀಗೆ ಗಾಂಧೀಜಿ ಎಲ್ಲಾ ವಸ್ತುಗಳ ಒಳಗಡೆಯಿದ್ದು ಪ್ರಜ್ವಲಿಸುತ್ತಾ ಸಾಗುತ್ತಾರೆ. ಕನ್ನಡ ಸಾಹಿತ್ಯದೊಳಗೆ ಗಾಂಧಿ ದೊಡ್ಡಶಕ್ತಿಯಾಗಿ ಹೊರಹೊಮ್ಮಿದ್ದು ಬೆಳಗಾವಿ ಅಧಿವೇಶನದ ನಂತರದಲ್ಲಿ. ಬಲಗೈಯಲ್ಲಿ ಗೀತೆಯಿದ್ದರೂ ಧರ್ಮಾತೀತ ವ್ಯಕ್ತಿತ್ವ ಹೊಂದಿದ್ದ ಗಾಂಧಿಯವರನ್ನು ಎಲ್ಲಾ ಪ್ರಾಂತೀಯ ಭಾಷೆಯ ಲೇಖಕರು, ಕವಿಗಳು, ಸಾಹಿತಿಗಳು ತಮ್ಮ ಕವನ, ಕಾದಂಬರಿ, ಕಥೆ, ಶಿಶುಗೀತೆ ಮುಂತಾದ ಪ್ರಕಾರಗಳಲ್ಲಿ ಗಾಂಧಿ ಜೀವನದ ಹಲವಾರು ಮಗ್ಗಲುಗಳನ್ನು ವಿಶ್ಲೇಷಿಸಿದ್ದಾರೆ.
ನವೋದಯ, ನವ್ಯ, ದಲಿತ-ಬಂಡಾಯ ಸಾಹಿತ್ಯ ಕಾಲಘಟ್ಟದಲ್ಲಿ ಬಹುಷಃ ಗಾಂಧಿ ಎಲ್ಲರ ಸಾಹಿತ್ಯ ವಸ್ತುವಾಗಿ ಬಿಡುತ್ತಾರೆ. ಪರಿಚಯಿಸುವ, ವಿಮರ್ಶಿಸುವ, ವಿಶ್ಲೆಷಿಸುವ, ಟೀಕಿಸುವ ಸಂಗತಿಗಳು ಹೆಗ್ಗಿಲ್ಲದೇ ನಡೆದವು.
‘ಬರ್ಕೈಡ್’ ಎಂಬ ವಿದೇಶಿ ಲೇಖಕ ತನ್ನ ‘ಬರ್ಕೈಡ್ ಕಂಡ ಭಾರತ’ ಕೃತಿಯಲ್ಲಿ ಗಾಂಧಿಯನ್ನು ಸುಮಾರು 13 ಸಲ ಇಂಟರ್‍ವ್ಯೂವ್ ಮಾಡಿ ಸಮಗ್ರ ಚಿತ್ರಣ ದೊರಕಿಸಿಕೊಟ್ಟಿದ್ದಾರೆ. ಹಾಗೆಯೇ ರಾಷ್ಟ್ರಕವಿ ಕುವೆಂಪುರವರು ತಮ್ಮ ‘ಪಾಂಚಜನ್ಯ’ದಲ್ಲಿ ಸ್ವಾತಂತ್ರದ ಪರಿಭಾಷೆ ಹಾಗೂ ಗಾಂಧಿಯ ಗಟ್ಟಿತನವನ್ನು ಸೊಗಸಾಗಿ ಬಣ್ಣಿಸಿದ್ದಾರೆ.
ಪ್ರೋ. ಯಶವಾಲ್ ಬರೆÀದ ‘ಗಾಂಧಿವಾದದ ಶವ ಪರೀಕ್ಷೆ’ ಎಂಬ ಕೃತಿಯು ಗಾಂಧೀಜಿಯ ಕೆಲವು ವಿರೋದಾಭಾಸ ವ್ಯಕ್ತಿತ್ವದ ಮೆಲೂ ಬೆಳಕು ಚೆಲ್ಲುತ್ತದೆ.
ಲೋಹಿಯಾ ಗಾಂಧಿಯಲ್ಲಿ ಹೆಣ್ಣು ಮತ್ತು ದೈವತ್ವವನ್ನು ಕಂಡೆ ಎಂದು ಒಂದು ಕಡೆ ಹೇಳಿದ್ದಾರೆ.
ನಾಗರೀಕ ಪ್ರಪಂಚದ ಪ್ರಬುದ್ಧತೆಯೊಳಗೆ ‘ಗಾಂಧಿ’ ಬಹುಮುಖ ವಸ್ತು ವೈವಿಧ್ಯತೆಯನ್ನು ಚಿತ್ರಿಸಿದ್ದಾರೆ. ಮಾನವನೊಳಗಿನ ಪಾಪ ಪ್ರಜ್ಞೆ, ಮುಗ್ಧತೆ, ದಿಟ್ಟತನ, ಒಳ್ಳೆಯತನ, ಆಡಂಬರ ಹೆಣ್ತನದಲ್ಲಿಯೂ ‘ಗಾಂಧಿ’ ಒಡಮೂಡುತ್ತಾರೆ.
ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಅಂಬೇಡ್ಕರ್ ವಿಚಾರದಲ್ಲಿ ಗಾಂಧಿ ವಿಲನ್ ಆಗಿ ಕಾಡ್ತಾರೆ. ಗಾಂಧಿ ಮನಸ್ಸು ಮಾಡಿದ್ದರೆ ಭಗತ್‍ಸಿಂಗ್‍ರವರನ್ನು ಗಲ್ಲಿನಿಂದ ಮುಕ್ತಿ ಹೊಂದಿಸÀಬಹುದಿತ್ತು. ಆದರೆ ಆಂಗ್ಲ ಸರ್ಕಾರ ಗಾಂಧಿಯನ್ನು ಅಂತಿಮವಾಗಿ ಕೇಳಿದಾಗ ಕಾನೂನಿಂತೆ ಮಾಡಿ ಎಂದು ಉತ್ತರಿಸಿದ್ದು  ಮಾರ್ಮಿಕವಾಗಿ ಕಂಡುಬರುತ್ತದೆ.
ಕನ್ನಡ ಸಾಹಿತ್ಯದಲ್ಲಿ ಪೂರ್ಣಚಂದ್ರ ತೇಜಸ್ವಿ, ಡಿ.ಆರ್ ನಾಗರಾಜ್, ದೆವನೂರು ಮಹದೇವ, ಜಿ.ಎಸ್ ಶಿವರುದ್ರಪ್ಪ, ಬೇಂದ್ರೆಯವರ ಕಾವ್ಯ ಬರಹಗಳಲ್ಲಿ ಗಾಂಧಿ ವಿಭಿನ್ನವಾಗಿ ಕಾಣುತ್ತಾರೆ. ಕುವೆಂಪುವಿಗೆ ಉತ್ಸಾಹವಾಗಿ, ಬೇಂದ್ರೆಗೆ ‘ಉಲ್ಲಾಸ’ವಾಗಿ, ಪು.ತಿ.ನಗೆ ‘ವಿಷಾದ’ವಾಗಿ ಗಾಂಧಿ ಗೋಚರಿಸುತ್ತಾರೆ. ಅದರಲ್ಲೂ ಗಾಂಧಿ ಕುರಿತು 25ರಿಂದ 30 ಕವಿತೆಗಳನ್ನು ಬೇಂದ್ರೆ ಬರೆದಿದ್ದಾರೆ. ಗಾಂಧಿಯನ್ನು ಜಾತ್ಯಾತೀತವಾದದ ನೆಲೆಗಟ್ಟಿನಲ್ಲೇ ನೋಡಿದ್ದೇ ಹೆಚ್ಚು.
ಜಿ.ಎಸ್ ಶಿವರುದ್ದರಪ್ಪನವರು ತಮ್ಮ ದೇವಶಿಲ್ಪಿ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ.
ಸುತ್ತ ಮುತ್ತ ಅಂಧಕಾರ
ಮಧ್ಯ ಹನಿಗಳ ಪಂಜರ
ದೈತ್ಯ ಸೆರೆಯ ಕಂಬಿಯೊಳಗೆ
ಬಂತು ದೇವ ಕುಂಜರ
ಮತ್ತ ಮತ್ತೆ ಅಂಧಕಾರ
ಮಿಥ್ಯ ಹನಿಗಳ ಪಂಜರ
ಸೊಂಡಿಲಾಡಿಸುತ್ತ ಬರುವು
ದದೋ ದೇವ ಕುಂಜರ.....
ಹೀಗೆ ಪಂಜರದ ಹಿಂದೆ ಶ್ರೀಕೃಷ್ಣನ ರೀತಿಯಲ್ಲಿ ಗಾಂಧಿಯನ್ನು ಜಿ.ಎಸ್.ಎಸ್ ಕಾಣುತ್ತಾರೆ.
ಕುವೆಂಪುರವರು ಗಾಂಧಿ ಕುರಿತು ತಮ್ಮದೊಂದು ಕವಿತೆಯಲ್ಲಿ ಹೀಗೆ ಉಲ್ಲೇಖಿಸುತ್ತಾರೆ.
ಮಹಾಸ್ವಾತಂತ್ರ್ಯ ರಣಯಾಗ ಧೂಮದಲಿ
ಶ್ವೇತಾಗ್ನಿ ಜ್ವಾಲೆಯೊಂದುರಿಯುತಿದೆ, ನಿಶ್ಚಲಂ
ರಾಜಿಸುತಿದೆ-ಶಾಂತಿಯಲಿ ಹಿಮ ಮಹಾ
ಚಲಂ ರಾರಾಜಿಸುವಂ ನೀಲಮ ನಭೋಧಾಮದಲಿ....
ಎಂದು ಕುವೆಂಪು ‘ಗಾಂಧಿ’ಯನ್ನು ‘ಶ್ವೇತಾಗ್ನಿ’ಗೆ ಹೋಲಿಸಿದ್ದಾರೆ.
ಕೆ.ಎಸ್.ಎನ್ ಒಂದು ಕಡೆ ಗಾಂಧಿ ಜೀವನ ಕುರಿತು ಹೀಗೆ ಹೇಳಿದ್ದಾರೆ
ಆಫ್ರಿಕನ್ ಕತ್ತಲೆಗೆ ಬೆಳಕ ಬೀರಿದೆ ನೀನು
ಆಂಗ್ಲಾಧಿಕಾರ ಮೋಹವದು ಮುರಿದೆ
ಅವರಿವರ ದುಷ್ಕøತಿಗೆ ಕುದಿದು ಕಂಬನಿ ಮಿಡಿದೆ
ಉಪವಾಸದಗ್ನಿಯಲಿ ನಡೆದು ಬಂದೆ......
ಆಫ್ರಿಕದ ನೆಲದಲ್ಲಿ ನಡೆಸಿದ ಹೋರಾಟದ ಮೇಲೆ ಬೆಳಕು ಚೆಲ್ಲುವುದರ ಮೂಲಕ ಗಾಂಧಿ ವ್ಯಕ್ತಿತ್ವವನ್ನು ಸ್ಫುರಿಸಿದ್ದಾರೆ.
ಒಟ್ಟಾರೆಯಾಗಿ ಕನ್ನಡ ಸಾಹಿತ್ಯದಲ್ಲಿ ‘ಗಾಂಧಿ’ ಪ್ರಭಾವ ಬಹಳವೇ ಆಗಿದೆ. ಅವರ ವ್ಯಕ್ತಿತ್ವ ಆದರ್ಶಗಳು ಜೊತೆ ಜೊತೆಗೆ ವಿರೋದಾಭಾಸಗಳು ಸಹ ಬರವಣಿಗೆ ರೂಪದಲ್ಲಿ ಬಂದವು ಎಂದರು.
‘ನಾ ಮೆಚ್ಚಿದ ಕವಿತೆ’ ಎಂಬ ವಿಷಯದಡಿ ಶ್ರೀ ವಿಜಯ ಹಾಸನರವರು ವಸಂತ್‍ಕುಮಾರ್ ಪೆರ್ಲ ರವರ ‘ಯುಧಿಷ್ಠಿರ ಪ್ರಲಾಪ’ ಕವಿತೆ ವಿಶ್ಲೆಷಿಸಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಪ್ರಯೋಜಕರಾದ ಟಿ.ಎಚ್. ಅಪ್ಪಾಜೀಗೌಡ, ಚಂದ್ರಕಾಂತ ಪಡೆಸೂರು, ಡಾ. ಕೆ.ಕೆ ಜಯಚಂದ್ರ ಗುಪ್ತ, ಸುಶೀಲಾ ಸೋಮಶೇಖರ್, ಸಂಚಾಲಕರಾದ ಕೊಟ್ರೇಶ್ ಎಸ್. ಉಪ್ಪಾರ್, ಪ್ರದೀಪ್ ಎಚ್.ಡಿ, ಸಂದೀಪ್ ಪಡೆಸೂರ್, ಎಂ.ಆರ್. ಕುಮುದ, ಲಲಿತ. ಎಸ್, ಶೀಟಿ, ಶಿವಶಂಕರಪ್ಪ, ಆರ್. ವೆಂಕಟೆಶ್, ಕಲಾವತಿ ಮಧೂಸುದನ್, ಶ್ರೀನಿವಾಸ ಡಿ. ಶೆಟ್ಟಿ, ವೇದಾವತಿ, ಗಂಗಾಧರ, ಚೂಡಾಮಣಿ ಮುಂತಾದವರು ಕವಿತೆ ವಾಚಿಸಿದರು.
ಕಾರ್ಯಕ್ರಮದಲ್ಲಿ ದೇವಿರಮ್ಮ, ದುದ್ದ ಯೋಗೇಂದ್ರ, ಲಕ್ಷ್ಮೀ ವಿಶ್ವನಾಥರವರು ಗಾಯನ ಮಾಡಿದರು. ಶ್ರೀಮತಿ ಮಹಾದೇವಿ ಅಪ್ಪಾಜಿಗೌಡ್ರು, ಆರ್ ಶಿವರಾಂ, ವಿಶ್ವನಾಥ ಮೈಯ, ಪ್ರಭಾವತಿ ಪಡೆಸೂರು ಮುಂತಾದವರು ಉಪಸ್ಥಿತರಿದ್ದರು.
ದೇವಿರಮ್ಮ ಪ್ರಾರ್ಥಿಸಿದರು, ಟಿ.ಎಚ್ ಅಪ್ಪಾಜಿಗೌಡ್ರು ಸ್ವಾಗತಿಸಿದರು, ಸಂಚಾಲಕರಾದ ಕೊಟ್ರೇಶ್ ಎಸ್, ಉಪ್ಪಾರ್ ನಿರೂಪಿಸಿ, ವಂದಿಸಿದರು.






0 comments:

Post a Comment

 
Blogger Templates