ಹಾಸನ, ಸೆ. 6: ಕನಿಷ್ಟ ಓದು ಬರಹದಂತಹ ಸಾಹಿತ್ಯ ಚಟುವಟಿಕೆಯೂ ಇಲ್ಲದ ಮನೆ ಮನೆಯಲ್ಲ; ಸುಡುಗಾಡು ಎಂದು ಕುವೆಂಪು ಅವರು ಅಂದೇ ಹೇಳಿದ್ದಾರೆ. ಈ ಹಿಂದೆ ಪ್ರತಿ ಮನೆಯಲ್ಲೂ ಸ್ವಲ್ಪ ಸಮಯವಾದರೂ ಕಾವ್ಯ ವಾಚನ, ಸಾಹಿತ್ಯದ ಓದು ಬರಹದ ಚಟುವಟಿಕೆ ಇರುತ್ತಿತ್ತು. ದುರದೃಷ್ಟವಶಾತ್ ಇಂದು ಟಿ.ವಿ, ಮೊಬೈಲ್, ವಾಟ್ಸಪ್‍ನಂತಹ ವಿದ್ಯುನ್ಮಾನ ಮಾಧ್ಯಮಗಳ ದುಷ್ಪರಿಣಾಮದಿಂದಾಗಿ ದೈನಂದಿನ ಸಾಹಿತ್ಯ ಚಟುವಟಿಕೆಗಳೆಲ್ಲ ನಿಂತು ಕುವೆಂಪು ಹೇಳಿದಂತೆ ಮನೆಗಳೆಲ್ಲ `ಸುಡುಗಾಡು’ಗಳಾಗಿವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರವಾಚಕರಾದ ಡಾ. ಎನ್.ಎಂ. ತಳವಾರ ವಿಷಾದಿಸಿದ್ದಾರೆ.
ಮನೆ ಮನೆ ಕವಿಗೋಷ್ಠಿ ಸಂಘಟನೆ ವತಿಯಿಂದ ಇಂದು ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ, 222ನೇ ತಿಂಗಳ ಕವಿಗೋಷ್ಠಿ ಸ್ಮರಣಾರ್ಥ ಹೊರತಂದಿರುವ `ಮನೆ ಮನೆ ಮಲ್ಲಿಗೆ’ ಸಂಪಾದಿತ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿ, ಸಾಹಿತ್ಯವೆಂಬುದು ದೈನಂದಿನ ಚಟುವಟಿಕೆಯ ಭಾಗವಾಗಬೇಕು ಎಂದು ಆಶಿಸಿದರು.
ಮನೆ ಮನೆ ಕವಿಗೋಷ್ಠಿಯಂತಹ ಸಹಕಾರ ತತ್ವದ ಪ್ರಕಾಶನಗಳು ಇಂದು ಅತಗತ್ಯ ಎಂದು ಪ್ರತಿಪಾದಿಸಿದ ಅವರು, ಈಸಂಘಟನೆ ಆಧುನಿಕ ಕನ್ನಡ ಸಾರಸ್ವತ ಲೋಕದ ವಿಸ್ಮಯವಾಗಿದೆ. 2 ದಶಕಗಳಿಂದಲೂ ನಿರಂತರತೆ ಕಾಯ್ದುಕೊಂಡು ಬಂದಿರುವುದೂ ಒಂದು ದಾಖಲೆಯಾಗಿದೆ; ಹಾಸನದ ಕವಿ ಬಳಗವು ಸದ್ದಿಲ್ಲದೆ ಸಾಧನೆ ಮಾಡಿದೆ; ಇಡೀ ನಗರಕ್ಕೆ ಇದೊಂದು ಭೂಷಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಚ್ಚಿ ಬೀಳಿಸಬೇಕು:
ಕೃತಿ ಕುರಿತು ಉಪನ್ಯಾಸಕ ಸಿ.ಚ. ಯತೀಶ್ವರ ಮಾತನಾಡಿ, ಇಂದಿನ ಜಾಗತೀಕರಣದ ವಿಷಮ ಪರಿಸ್ಥಿತಿಯಲ್ಲಿ ಧ್ಯಾನಸ್ಥ ಸ್ಥಿತಿ ಮರೆಯಾಗುತ್ತಿದೆ. ಮಾಧ್ಯಮಗಳು ಮೌಢ್ಯತೆಯತ್ತ ಜನರನ್ನು ಸೆಳೆಯುತ್ತಿವೆ; ಜನರೂ ಅದನ್ನೇ ಬಯಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕವಿಗೆ ಸಾವಿದೆ; ಆದರೆ ಕಾವ್ಯಕ್ಕೆ ಸಾವಿಲ್ಲ; ಕವನಕ್ಕೆ ವಸ್ತುವಿನ ಆಯ್ಕೆ ಮತ್ತು ಸಂಯೋಜನೆ ಮುಖ್ಯ. ಯಾವುದೇ ಬರಹ ಬೆಚ್ಚಿ ಬೀಳಿಸಬೇಕು; ನವೋದಯ, ನವ್ಯ, ಬಂಡಾಯ, ದಲಿತ ಇತ್ಯಾದಿ ಪಂಥಗಳ ಹಣೆಪಟ್ಟಿ ಕಟ್ಟಿಕೊಳ್ಳುವ ಕಾಲ ಇದಲ್ಲ; ಹರಿದ ಬಟ್ಟೆಗಳನ್ನು ಜೋಡಿಸುವ ಸೂಜಿ ದಾರದ ಕೆಲಸವನ್ನು ಸಾಹಿತ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಕೃತಿಯಲ್ಲಿನ ಅನೇಕ ಮನೋಜ್ಞ ಕವಿತೆಗಳ ಕುರಿತು ವಿಶ್ಲೇಷಣೆಯನ್ನೂ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತರಾದ ಲೀಲಾವತಿ ಮಾತನಾಡಿ, ಸಾಹಿತಿಯಾದವನು ಪ್ರಸ್ತುತ ಸಾಮಾಜಿಕ ಸಂದರ್ಭಗಳಿಗೆ ಸ್ಪಂದಿಸಬೇಕು ಎಂದು ಪ್ರತಿಪಾದಿಸಿದರು.
ಆಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಡಾ. ಎಚ್.ಎಲ್. ಜನಾರ್ಧನ್ ಅಧ್ಯಕ್ಷೀಯ ಭಾಷಣ ಮಾಡಿ, `ಅಹಂ’ನಿಂದಾಗಿಯೇ ಸಂಘಟನೆಗಳಲ್ಲಿ ಒಡಕು ಕಾಣಿಸಿಕೋಳ್ಳುತ್ತದೆ; ಆದರೆ ಮನೆ ಮನೆ ಕವಿಗೋಷ್ಠಿಯು ಕುವೆಂಪು ಹೇಳಿದಂತೆ `ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರೂ ಅಲ್ಲ’ ಎಂಬ ತತ್ವವನ್ನು ಅಳವಡಿಸಿಕೊಂಡಿರುವುದರಿಂದ ಹಾಗೂ ಹಣಕಾಸು ಸಂಗ್ರಹ ಮಾಡುತ್ತಿಲ್ಲವಾದ್ದರಿಂದ ತನ್ನ ನಿರಂತರತೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿ ನೂರಾರು ವರ್ಷ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಅತಿಥಿಗಳಿಗೆ ಸನ್ಮಾನ
ಮನೆ ಮನೆ ಕವಿಗೋಷ್ಠಿ ಸಂಚಾಲಕ ಕೊಟ್ರೇಶ್ ಉಪ್ಪಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಮನೆ ಮನೆ ಕವಿಗೋಷ್ಠಿಯು ಇಷ್ಟು ದಿವಸಗಳ ಕಾಲ ಯಶಸ್ವೀಯಾಗಿ ನಡೆದುಕೊಂಡು ಬಂದಿದೆ ಎಂದರೆ ಅದು ಮಾಧ್ಯಮ ಮಿತ್ರರ ಸಹಕಾರದಿಂದ ಮಾತ್ರ ಸಾಧ್ಯವಾಯಿತು. ಎರಡು ದಶಕಗಳ ಕಾಲ ಯಾವ ಬೇಧಭಾವಗಳಿಲ್ಲದೆ ಎಲ್ಲರನ್ನೂ ಸಮವಾಗಿ ಕಾಣುತ್ತಾ ಬೆಳೆಸುತ್ತಾ ಬಂದ ನಮ್ಮ ಸಂಘಟನೆಯು ಯಾವುದೇ ಅಧಿಕಾರಗಳಿಲ್ಲದ ಮುಕ್ತ ಸಂಘಟನೆಯಾಗಿದೆ ಎಂದರು. ಕೆ.ಕೆ. ಜಯಚಂದ್ರ ಗುಪ್ತ ಅವರುಯ ಲೆಕ್ಕಪತ್ರ ಮಂಡಿಸಿದರು. ವೇದಾವತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸುರೇಶ್ ಗುರೂಜಿ ಪ್ರಾರ್ಥಿಸಿದರು. ಕಲಾವತಿ ಮಧುಸೂದನ್ ಸ್ವಾಗತಿಸಿದರು. ಕುಮುದ ಹೆಬ್ಬಾರ್ ವಂದಿಸಿದರು.
ಸಮಾರಂಭದಲ್ಲಿ ಅತಿಥಿ ಗಣ್ಯರಾದ ತಳವಾರ್ ಹಾಗೂ ಯತೀಶ್ವರ್ ಅವರುಗಳಿಗೆ ಶಾಲು ಹೊದಿಸಿ ಫಲ ತಾಂಬೂಲಗಳೊಂದಿಗೆ ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.




0 comments:
Post a Comment